1 ನಮ್ಮ ಸಹೋದರಿಯೂ ಕೆಂಖ್ರೆಯ ಸಭೆಯ ಸೇವಕಿಯೂ ಆಗಿರುವ ಫೊಯಿಬೆಯನ್ನು ನಿಮಗೆ ಪರಿಚಯಿಸುತ್ತೇನೆ. 2 ಕರ್ತನಲ್ಲಿ ದೇವಜನರಿಗೆ ಯೋಗ್ಯವಾಗಿರುವ ರೀತಿಯಲ್ಲಿ ಆಕೆಯನ್ನು ಸ್ವೀಕರಿಸಿ, ಆಕೆಯು ಅನೇಕರಿಗೂ ನನಗೂ ವಿಶೇಷವಾದ ರೀತಿಯಲ್ಲಿ ಸಹಾಯ ಮಾಡಿದವಳಾಗಿರುವುದರಿಂದ ನಿಮಗೆ ಯಾವ ಕೊರತೆಗಳಿದ್ದರೂ ಆಕೆಗೆ ಬೇಕಾದದ್ದನ್ನು ಒದಗಿಸಿರಿ.
3 ಕ್ರಿಸ್ತ ಯೇಸುವಿನಲ್ಲಿ ನನ್ನ ಜೊತೆ ಕೆಲಸದವರಾಗಿರುವ ಪ್ರಿಸ್ಕಳಿಗೂ ಅಕ್ವಿಲನಿಗೂ ನನ್ನ ವಂದನೆಗಳನ್ನು ತಿಳಿಸಿರಿ. 4 ಅವರು ನನ್ನ ಪ್ರಾಣದ ನಿಮಿತ್ತವಾಗಿ ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಒಡ್ಡಿದರು. ಅವರಿಗೆ ನಾನು ಮಾತ್ರವೇ ಅಲ್ಲ ಯೆಹೂದ್ಯರಲ್ಲದವರು ಎಲ್ಲಾ ಸಭೆಗಳವರೂ ಕೃತಜ್ಞರಾಗಿರುತ್ತಾರೆ.
5 ಅವರ ಮನೆಯಲ್ಲಿ ಸೇರಿ ಬರುವ ಸಭೆಗೂ ನನ್ನ ವಂದನೆಗಳನ್ನು ತಿಳಿಸಿರಿ.
6 ನಿಮಗೋಸ್ಕರ ಬಹು ಶ್ರಮೆಪಟ್ಟ ಮರಿಯಳಿಗೆ ವಂದನೆಗಳು.
7 ನನ್ನ ಬಂಧುಗಳೂ ಜೊತೆ ಸೆರೆಯವರೂ ಆದ ಅಂದ್ರೋನಿಕನಿಗೂ ಯೂನ್ಯಳಿಗೂ ವಂದನೆಗಳು. ಅವರು ಅಪೊಸ್ತಲರಲ್ಲಿ ಪ್ರಸಿದ್ಧರೂ ಮತ್ತು ನನಗಿಂತ ಮೊದಲೇ ಕ್ರಿಸ್ತನಲ್ಲಿದ್ದವರೂ ಆಗಿರುತ್ತಾರೆ.
8 ನನಗೆ ಕರ್ತನಲ್ಲಿ ಪ್ರಿಯನಾದ ಅಂಪ್ಲಿಯಾತನಿಗೆ ವಂದನೆಗಳು.
9 ಕ್ರಿಸ್ತನಲ್ಲಿ ನನ್ನ ಜೊತೆ ಸೇವಕನಾಗಿರುವ ಉರ್ಬಾನನಿಗೂ ನನಗೆ ಪ್ರಿಯನಾದ ಸ್ತಾಖುನಿಗೂ ವಂದನೆಗಳು.
10 ಕ್ರಿಸ್ತನಲ್ಲಿ ಪರಿಶೋಧಿತನಾದ ಅಪೆಲ್ಲನಿಗೆ ವಂದನೆಗಳು,
11 ನನ್ನ ಸಂಬಂಧಿಯಾಗಿರುವ ಹೆರೊಡಿಯೋನನಿಗೆ ವಂದನೆಗಳು,
12 ಕರ್ತನ ಸೇವೆಯಲ್ಲಿ ದುಡಿಯುವ ತ್ರುಫೈನಳಿಗೂ ತ್ರುಫೋಸಳಿಗೂ ವಂದನೆಗಳು,
13 ಕರ್ತನಲ್ಲಿ ಆಯ್ಕೆಯಾಗಿರುವ ರೂಫನಿಗೂ ನನಗೂ ತಾಯಿಯಂತಿದ್ದ ಅವನ ತಾಯಿಗೂ ವಂದನೆಗಳು.
14 ಅಸುಂಕ್ರಿತ, ಪ್ಲೆಗೋನ, ಹೆರ್ಮೆಯನಿಗೂ ಪತ್ರೋಬನಿಗೂ ಹೆರ್ಮಾನ ಮತ್ತು ಅವನೊಂದಿಗಿರುವ ಪ್ರಿಯರಿಗೂ ವಂದನೆಗಳು.
15 ಫಿಲೊಲೊಗ, ಯೂಲ್ಯಳು, ನೇರ್ಯ ಮತ್ತು ಅವನ ಸಹೋದರಿ, ಒಲುಂಪ ಮತ್ತು ಅವರೊಂದಿಗಿರುವ ಎಲ್ಲಾ ಭಕ್ತರಿಗೂ ವಂದನೆಗಳು.
16 ಪವಿತ್ರವಾದ ಮುದ್ದನ್ನಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.
17 ಪ್ರಿಯರೇ, ನೀವು ಕಲಿತುಕೊಂಡ ಬೋಧನೆಗೆ ವಿರೋಧವಾಗಿರುವ ಭೇದಗಳನ್ನೂ ಅಭ್ಯಂತರಗಳನ್ನೂ ಮಾಡುವವರ ಬಗ್ಗೆ ಎಚ್ಚರಿಕೆಯಿಂದಿರಿ. ಅಂಥವರಿಂದ ದೂರವಾಗಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 18 ಅಂಥಾ ಜನರು ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನ ಸೇವೆ ಮಾಡುವವರಾಗಿರದೆ ತಮ್ಮ ಹೊಟ್ಟೆಯ ಸೇವೆ ಮಾಡುವವರಾಗಿರುತ್ತಾರೆ. ನಯವಾದ ಮತ್ತು ಮುಖಸ್ತುತಿಯ ಮಾತುಗಳಿಂದ ನಿಷ್ಕಪಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ. 19 ನಿಮ್ಮ ವಿಧೇಯತೆಯು ಎಲ್ಲಾ ಮನುಷ್ಯರಿಗೂ ಪ್ರಸಿದ್ಧವಾಯಿತು. ಆದ್ದರಿಂದ ನಾನು ನಿಮ್ಮ ವಿಷಯದಲ್ಲಿ ಸಂತೋಷಪಡುತ್ತೇನೆ. ಆದರೆ ನೀವು ಒಳ್ಳೆಯದನ್ನು ಕುರಿತು ಜ್ಞಾನಿಗಳಾಗಿಯೂ ಕೆಟ್ಟವುಗಳನ್ನು ಕುರಿತು ನಿಷ್ಕಳಂಕರಾಗಿಯೂ ಇರಬೇಕೆಂದು ಅಪೇಕ್ಷಿಸುತ್ತೇನೆ.
20 ಆಗ ಸಮಾಧಾನದ ದೇವರು ಬೇಗನೆ ಸೈತಾನನನ್ನು ನಿಮ್ಮ ಕಾಲುಗಳ ಕೆಳಗೆ ಹಾಕಿ ಜಜ್ಜಿಬಿಡುವನು.
21 ನನ್ನ ಜೊತೆ ಕೆಲಸದವನಾಗಿರುವ ತಿಮೊಥೆಯನು ನಿಮಗೆ ವಂದನೆಗಳನ್ನು ತಿಳಿಸುತ್ತಾನೆ. ಹಾಗೆಯೇ ನನ್ನ ಬಂಧುಗಳಾದ ಲೂಕ್ಯನೂ ಯಾಸೋನನೂ ಸೋಸಿಪತ್ರನೂ ನಿಮಗೆ ವಂದನೆಗಳನ್ನು ತಿಳಿಸುತ್ತಾರೆ.
22 ಈ ಪತ್ರವನ್ನು ಬರೆದ ತೆರ್ತ್ಯನೆಂಬ ನಾನು ಕರ್ತನಲ್ಲಿ ನಿಮ್ಮನ್ನು ವಂದಿಸುತ್ತೇನೆ.
23 ಇಲ್ಲಿ ನನಗೂ ಇಡೀ ಸಭೆಗೂ ಅತಿಥಿ ಸತ್ಕಾರ ಮಾಡುತ್ತಿರುವ ಗಾಯನು ತನ್ನ ವಂದನೆಗಳನ್ನು ತಿಳಿಸುತ್ತಾನೆ.
24 ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯು ನಿಮ್ಮೆಲ್ಲರೊಡನೆ ಇರಲಿ! ಆಮೆನ್.[a]
25 ನನ್ನ ಸುವಾರ್ತೆಯು ಹೇಳುವಂತೆಯೇ ನಿಮ್ಮನ್ನು ಬಲಪಡಿಸುವ ದೇವರಿಗೆ ಈಗ ಎಲ್ಲಾ ಮಹಿಮೆಯಾಗಲಿ. ಕ್ರಿಸ್ತ ಯೇಸುವಿನ ಕುರಿತಾಗಿರುವ ಈ ಸಂದೇಶವು ಆದಿಯಿಂದಲೂ ಗುಪ್ತವಾಗಿರುವ ರಹಸ್ಯದ ದೇವರ ಯೋಜನೆಯು ಯೆಹೂದ್ಯರಲ್ಲದವರಾದ ನಿಮಗಾಗಿ ಈಗ ಪ್ರಕಟವಾಗಿದೆ. 26 ಆದರೆ ನಿತ್ಯ ದೇವರು ಆಜ್ಞಾಪಿಸಿದಂತೆ ಈಗ ಪ್ರವಾದಿಗಳ ಗ್ರಂಥಗಳ ಮೂಲಕ ಮುಂತಿಳಿಸಿರುವಂತೆ, ಈ ಸಂದೇಶವು ಯೆಹೂದ್ಯರಲ್ಲದ ಜನರೆಲ್ಲರಿಗೂ ತಿಳಿಸಲಾಗಿದೆ. ಹೀಗೆ ಅವರು ನಂಬಿದ್ದರಿಂದ ವಿಧೇಯರಾಗುತ್ತಾರೆ. 27 ಶಕ್ತರಾಗಿರುವ ಒಬ್ಬರೇ ಜ್ಞಾನವಂತರಾಗಿರುವ ದೇವರಿಗೆ ಕ್ರಿಸ್ತ ಯೇಸುವಿನ ಮೂಲಕ ಎಂದೆಂದಿಗೂ ಮಹಿಮೆಯಾಗಲಿ! ಆಮೆನ್.
-
a 16:24 ಕೆಲವು ಮೂಲ ಪ್ರತಿಗಳಲ್ಲಿ ಈ ವಾಕ್ಯ ಸೇರ್ಪಡೆಯಾಗಿರುವುದಿಲ್ಲ.
Languages