ನಿಮ್ಮ ಸ್ವತ್ತಾಗಿರುವ ಪರ್ವತದಲ್ಲಿಯೂ ಅವರನ್ನು ಸ್ಥಾಪಿಸುವಿರಿ.
18 “ಯೆಹೋವ ದೇವರು
ಯುಗಯುಗಾಂತರಗಳವರೆಗೆ ಆಳುವರು.”
19 ಫರೋಹನ ಕುದುರೆಗಳು ಅವನ ರಥಗಳ ಮತ್ತು ಸವಾರರ ಸಂಗಡ ಸಮುದ್ರದೊಳಗೆ ಬಂದಾಗ, ಯೆಹೋವ ದೇವರು ಸಮುದ್ರದ ನೀರನ್ನು ಅವರ ಮೇಲೆ ತಿರುಗಿ ಬರಮಾಡಿದರು. ಆದರೆ ಇಸ್ರಾಯೇಲರು ಸಮುದ್ರದ ಮಧ್ಯದಲ್ಲಿನ ಒಣನೆಲದ ಮೇಲೆ ದಾಟಿಹೋದರು. 20 ಆಗ ಪ್ರವಾದಿನಿಯಾಗಿದ್ದ ಆರೋನನ ಸಹೋದರಿ ಮಿರ್ಯಾಮಳು ಕೈಯಲ್ಲಿ ತಾಳವನ್ನು ತೆಗೆದುಕೊಂಡಳು. ಸ್ತ್ರೀಯರೆಲ್ಲರೂ ತಾಳಗಳನ್ನು ಹಿಡಿದುಕೊಂಡು ನಾಟ್ಯವಾಡುತ್ತಾ, ಆಕೆಯನ್ನು ಹಿಂಬಾಲಿಸಿ ಹೊರಹೊರಟರು. 21 ಮಿರ್ಯಾಮಳು ಅವರಿಗೆ ಹೀಗೆ ಹಾಡಿದಳು:
“ಯೆಹೋವ ದೇವರಿಗೆ ನೀವು ಹಾಡಿರಿ,
ಅವರು ಮಹೋನ್ನತದಲ್ಲಿದ್ದಾರೆ;
ಕುದುರೆಯನ್ನೂ ಸವಾರರನ್ನೂ
ಸಮುದ್ರದಲ್ಲಿ ಮುಣುಗಿಸಿಬಿಟ್ಟರು.”
ಕಹಿ ನೀರು ಸಿಹಿಯಾದದ್ದು
22 ಆಮೇಲೆ ಮೋಶೆಯು ಇಸ್ರಾಯೇಲರನ್ನು ಕೆಂಪು ಸಮುದ್ರದಿಂದ ನಡೆಸಿದನು. ಅವರು ಶೂರಿನ ಮರುಭೂಮಿಯೊಳಗೆ ಹೋದರು. ಅವರು ಮರುಭೂಮಿಯಲ್ಲಿ ಮೂರು ದಿನಗಳು ಪ್ರಯಾಣಮಾಡಿದರೂ ನೀರನ್ನು ಕಂಡುಕೊಳ್ಳಲಿಲ್ಲ. 23 ಅವರು ಮಾರಾ ಎಂಬಲ್ಲಿಗೆ ಬಂದ ಮೇಲೆ ಅಲ್ಲಿಯ ನೀರನ್ನು ಕುಡಿಯಲಾರದೆ ಇದ್ದರು; ಅದು ಕಹಿಯಾಗಿತ್ತು. ಆದಕಾರಣ ಅದರ ಹೆಸರು “ಮಾರಾ” ಎಂದು ಕರೆಯಲಾಯಿತು. 24 ಆದ್ದರಿಂದ ಜನರು, “ನಾವು ಏನು ಕುಡಿಯೋಣ?” ಎಂದು ಹೇಳಿ, ಮೋಶೆಗೆ ವಿರೋಧವಾಗಿ ಗೊಣಗುಟ್ಟಿದರು.
25 ಅವನು ಯೆಹೋವ ದೇವರಿಗೆ ಮೊರೆಯಿಟ್ಟನು. ಯೆಹೋವ ದೇವರು ಅವನಿಗೆ ಒಂದು ಗಿಡವನ್ನು ತೋರಿಸಿದರು. ಅವನು ಅದನ್ನು ನೀರಿನಲ್ಲಿ ಹಾಕಿದಾಗ, ನೀರು ಸಿಹಿಯಾಗಿ ಬಿಟ್ಟಿತು.
ಅಲ್ಲಿ ದೇವರು ಅವರಿಗಾಗಿ ಒಂದು ನಿಯಮವನ್ನೂ ಒಂದು ಶಾಸನವನ್ನೂ ಮಾಡಿದರು. ಅಲ್ಲಿಯೇ ದೇವರು ಅವರನ್ನು ಪರೀಕ್ಷಿಸಿದರು. 26 ದೇವರು, “ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತಿಗೆ ಶ್ರದ್ಧೆಯಿಂದ ಕಿವಿಗೊಟ್ಟು, ಅವರ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿ, ಅವರ ಆಜ್ಞೆಗಳಿಗೆ ಕಿವಿಗೊಟ್ಟು, ಅವರ ನಿಯಮಗಳನ್ನು ಕೈಗೊಂಡರೆ, ಈಜಿಪ್ಟಿನ ಮೇಲೆ ಬರಮಾಡಿದ ಯಾವ ವ್ಯಾಧಿಯನ್ನೂ ನಿಮ್ಮ ಮೇಲೆ ಬರಮಾಡುವುದಿಲ್ಲ. ನಿಮ್ಮನ್ನು ಸ್ವಸ್ಥಪಡಿಸುವ ಯೆಹೋವ ದೇವರು ನಾನೇ ಆಗಿದ್ದೇನೆ,” ಎಂದು ಪ್ರಕಟಪಡಿಸಿದರು.
27 ತರುವಾಯ ಇಸ್ರಾಯೇಲರು ಏಲೀಮಿಗೆ ಬಂದರು. ಅಲ್ಲಿ ಹನ್ನೆರಡು ನೀರಿನ ಬಾವಿಗಳೂ ಎಪ್ಪತ್ತು ಖರ್ಜೂರದ ಮರಗಳೂ ಇದ್ದವು. ಅವರು ಆ ನೀರಿನ ಬಳಿಯಲ್ಲಿ ಇಳಿದುಕೊಂಡರು.