1 ಅರಸನೂ ಹಾಮಾನನೂ ಎಸ್ತೇರ್ ರಾಣಿಯ ಔತಣಕ್ಕೆ ಬಂದರು. 2 ಎರಡನೆಯ ದಿವಸ ದ್ರಾಕ್ಷಾರಸವನ್ನು ಪಾನಮಾಡುತ್ತಿರುವಾಗ ಅರಸನು ಮತ್ತೊಮ್ಮೆ ಎಸ್ತೇರಳಿಗೆ, “ಎಸ್ತೇರ್ ರಾಣಿಯೇ, ನಿನ್ನ ವಿಜ್ಞಾಪನೆ ಏನು? ನಿನ್ನ ಬೇಡಿಕೆ ಏನು? ಅದು ನನ್ನ ರಾಜ್ಯದ ಅರ್ಧವಾಗಿದ್ದರೂ ಸರಿ, ನಾನು ಅದನ್ನು ನಿನಗೆ ಕೊಡುವೆನು,” ಎಂದನು.
3 ಆಗ ಎಸ್ತೇರ್ ರಾಣಿಯು ಉತ್ತರವಾಗಿ, “ಅರಸನೇ, ನಾನು ನಿನ್ನ ದೃಷ್ಟಿಯಲ್ಲಿ ದಯೆಹೊಂದಿದವಳಾಗಿದ್ದರೆ, ನನ್ನ ಪ್ರಾಣವನ್ನೂ ನನ್ನ ಜನರ ಪ್ರಾಣವನ್ನೂ ಉಳಿಸಬೇಕು. ಇದೇ ನನ್ನ ವಿಜ್ಞಾಪನೆ. ಇದೇ ನನ್ನ ಬೇಡಿಕೆ. 4 ಏಕೆಂದರೆ ನಾನು ಮತ್ತು ನನ್ನ ಜನರು ದುರಂತಕ್ಕೂ, ಕೊಲೆಗೂ, ಸರ್ವನಾಶಕ್ಕೂ ಮಾರಟವಾಗಿದ್ದೇವೆ. ಒಂದು ವೇಳೆ, ನಾವು ದಾಸರಾಗಿಯಾಗಲಿ, ದಾಸಿಯರಾಗಲಿ ಮಾರಾಟವಾಗಿದ್ದರೆ ನಾನು ಸುಮ್ಮನಿರುತ್ತಿದ್ದೆ. ಅಂಥ ಕಷ್ಟಕ್ಕಾಗಿ ನಾನು ಅರಸನನ್ನು ತೊಂದರೆಪಡಿಸದೆ ಸುಮ್ಮನೆ ಇದ್ದುಬಿಡುತ್ತಿದ್ದೆನು,” ಎಂದಳು.
5 ಆಗ ಅರಸನಾದ ಅಹಷ್ವೇರೋಷನು ರಾಣಿಯಾದ ಎಸ್ತೇರಳಿಗೆ, “ಯಾರು ಅವನು? ಈ ಪ್ರಕಾರ ಮಾಡಲು ಧೈರ್ಯಗೊಂಡವನು ಯಾರು? ಅವನು ಎಲ್ಲಿದ್ದಾನೆ?” ಎಂದನು.
6 ಅದಕ್ಕೆ ಎಸ್ತೇರಳು, “ಆ ವೈರಿಯೂ ಹಗೆಗಾರನೂ ಬೇರೆ ಯಾರೂ ಅಲ್ಲ, ಈ ದುಷ್ಟ ಹಾಮಾನನೇ!” ಎಂದಳು.
8 ಅರಸನು ಅರಮನೆಯ ತೋಟದಿಂದ ದ್ರಾಕ್ಷಾರಸದ ಔತಣ ಸ್ಥಳಕ್ಕೆ ಹಿಂದಿರುಗಿ ಬಂದಾಗ, ಹಾಮಾನನು ಎಸ್ತೇರಳು ಕುಳಿತಿರುವ ಹಾಸಿಗೆಯ ಮೇಲೆ ಬಿದ್ದಿದ್ದನು.