36 ಏಕೆಂದರೆ ಯೆಹೋವ ದೇವರು ತಮ್ಮ ಜನರಿಗೆ ನ್ಯಾಯತೀರಿಸುವರು.
ದೇವರು ತಮ್ಮ ಸೇವಕರ ಬಲ ಹೋಯಿತೆಂದೂ, ಗುಲಾಮರಾಗಲಿ,
ಸ್ವತಂತ್ರರಾಗಲಿ ಉಳಿಯಲಿಲ್ಲವೆಂದೂ ನೋಡಿದಾಗ,
ತಮ್ಮ ಸೇವಕರಿಗೋಸ್ಕರ ಕರುಣಿಸುವರು.
37 ಆಗ ಯೆಹೋವ ದೇವರು ಹೀಗನ್ನುವರು:
“ಅವರ ದೇವರುಗಳು ಎಲ್ಲಿ? ಅವರು ನಂಬಿಕೊಂಡಂಥ,
38 ಅವರ ಬಲಿಗಳ ಕೊಬ್ಬನ್ನು ತಿಂದಂಥ,
ಅವರ ಪಾನದ ಅರ್ಪಣೆಗಳ ದ್ರಾಕ್ಷಾರಸ ಕುಡಿದಂಥ ದೇವರುಗಳು ಎಲ್ಲಿ?
ಈಗ ಆ ದೇವರುಗಳು ಎದ್ದು ನಿಮಗೆ ಸಹಾಯ ಮಾಡಲಿ,
ನಿಮಗೋಸ್ಕರ ಕಾವಲಾಗಲಿ.
39 “ನಾನು ಇರುವಾತನೇ ಆಗಿದ್ದೇನೆ!
ನನ್ನ ಹಾಗೆ ಬೇರೆ ದೇವರು ಇಲ್ಲವೆಂದು ಈಗ ನೋಡಿರಿ.
ನಾನೇ ಸಾಯಿಸುತ್ತೇನೆ, ಬದುಕಿಸುತ್ತೇನೆ,
ಗಾಯಮಾಡುತ್ತೇನೆ, ನಾನೇ ಗುಣಪಡಿಸುತ್ತೇನೆ.
ನನ್ನ ಕೈಯಿಂದ ತಪ್ಪಿಸುವವನು ಯಾರೂ ಇಲ್ಲ.
40 ಆಕಾಶದ ಕಡೆ ನನ್ನ ಕೈಯೆತ್ತಿ,
ನಾನು ನಿತ್ಯವಾಗಿ ಬದುಕುವಾತನು ಎಂದು ಹೇಳುತ್ತೇನೆ.
41 ನಾನು ಮಿಂಚುವ ಖಡ್ಗವನ್ನು ಹದಮಾಡಿ,
ನನ್ನ ಕೈ ನ್ಯಾಯವನ್ನು ಹಿಡಿದುಕೊಳ್ಳುವಾಗ,
ನನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ,
ನನ್ನನ್ನು ದ್ವೇಷಿಸುವವರಿಗೆ ಮುಯ್ಯಿತೀರಿಸುವೆನು.
42 ಸತ್ತವರ ಮತ್ತು ಸೆರೆಯಾದವರ ರಕ್ತದಿಂದಲೂ,
ಶತ್ರುವಿಗೆ ಮಾಡಿದ ಪ್ರತೀಕಾರದಿಂದಲೂ
ನನ್ನ ಬಾಣಗಳು ಅಮಲೇರುವುದು.
ನನ್ನ ಖಡ್ಗವು ಮಾಂಸವನ್ನು ಭಕ್ಷಿಸುವುದು. ಹೀಗೆ ಶತ್ರುಗಳ ನಾಯಕರ ತಲೆ ಬೀಳುವುದು.”
43 ಎಲ್ಲಾ ಜನಾಂಗಗಳೇ, ದೇವಜನರ ಸಂಗಡ ಹರ್ಷಿಸಿರಿ.
ಏಕೆಂದರೆ ದೇವರು ತಮ್ಮ ದಾಸರ ರಕ್ತಕ್ಕೋಸ್ಕರ ಮುಯ್ಯಿ ತೀರಿಸುವರು.
ತಮ್ಮ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ,
ತಮ್ಮ ದೇಶಕ್ಕೋಸ್ಕರವೂ, ತಮ್ಮ ಜನರಿಗೋಸ್ಕರವೂ ದೋಷಪರಿಹಾರ ಮಾಡುವರು.
44 ಆಗ ಮೋಶೆಯು ನೂನನ ಮಗನಾದ ಹೋಶೇಯನ[b] ಸಂಗಡ ಬಂದು, ಈ ಹಾಡಿನ ಮಾತುಗಳನ್ನೆಲ್ಲಾ ಜನರು ಕೇಳುವ ಹಾಗೆ ಹೇಳಿದನು. 45 ಮೋಶೆಯು ಈ ಮಾತುಗಳನ್ನೆಲ್ಲಾ ಸಮಸ್ತ ಇಸ್ರಾಯೇಲಿಗೆ ಹೇಳಿ ತೀರಿಸಿದ ತರುವಾಯ ಅವನು ಅವರಿಗೆ, 46 “ನಾನು ಈ ಹೊತ್ತು ನಿಮಗೆ ಸಾಕ್ಷಿಯಾಗಿ ಹೇಳುವ ಮಾತುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳಿರಿ. ಈ ನಿಯಮದ ಮಾತುಗಳನ್ನು ಅನುಸರಿಸಬೇಕೆಂದು ನೀವು ನಿಮ್ಮ ಮಕ್ಕಳಿಗೆ ಆಜ್ಞಾಪಿಸಿರಿ. 47 ಏಕೆಂದರೆ ಇದು ನಿಮಗೆ ಕೇವಲ ವ್ಯರ್ಥವಾದದ್ದಲ್ಲ. ಇದು ನಿಮಗೆ ಜೀವವೇ. ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಯೊರ್ದನನ್ನು ದಾಟುವ ಭೂಮಿಯಲ್ಲಿ ಇದರಿಂದಲೇ ನಿಮ್ಮ ದಿವಸಗಳನ್ನು ಹೆಚ್ಚಿಸಿಕೊಳ್ಳುವಿರಿ,” ಎಂದು ಹೇಳಿದನು.
ನೆಬೋ ಬೆಟ್ಟದ ಮೇಲೆ ಮೋಶೆಯ ಮರಣ
48 ಆ ದಿವಸವೇ ಯೆಹೋವ ದೇವರು ಮೋಶೆಗೆ, 49 “ನೀನು ಈ ಅಬಾರೀಮ್ ಬೆಟ್ಟದ ಮೇಲೆ ಅಂದರೆ, ಮೋವಾಬ್ ದೇಶದಲ್ಲಿ ಯೆರಿಕೋವಿಗೆ ಎದುರಾಗಿ ಇರುವ ನೆಬೋ ಪರ್ವತದ ಮೇಲೆ ಏರಿ ಹೋಗು. ನಾನು ಇಸ್ರಾಯೇಲರಿಗೆ ಸೊತ್ತಾಗಿ ಕೊಡುವ ಕಾನಾನ್ ದೇಶವನ್ನು ನೋಡು. 50 ನಿನ್ನ ಸಹೋದರನಾದ ಆರೋನನು ಹೋರ್ ಬೆಟ್ಟದಲ್ಲಿ ಸತ್ತು, ತನ್ನ ಜನರ ಬಳಿಗೆ ಸೇರಿದ ಹಾಗೆ, ನೀನು ಏರಿಹೋಗುವ ಬೆಟ್ಟದಲ್ಲಿ ಸತ್ತು, ನಿನ್ನ ಜನರ ಬಳಿಗೆ ಸೇರಬೇಕು. 51 ನೀವಿಬ್ಬರೂ ಚಿನ್ ಮರುಭೂಮಿಯಲ್ಲಿ ಕಾದೇಶಿನ ಮೆರೀಬಾದ ನೀರಿನ ಬಳಿಯಲ್ಲಿ ನನ್ನನ್ನು ಇಸ್ರಾಯೇಲರ ಮುಂದೆ ನಂಬದೆ, ನನ್ನ ಪವಿತ್ರತೆಯನ್ನು ಇಸ್ರಾಯೇಲರ ನಡುವೆ ಕಾಪಾಡದೆ ನಂಬದೆ ಹೋದಿರಿ. 52 ಆದುದರಿಂದ, ನೀನು ಆ ದೇಶವನ್ನು ದೂರದಿಂದ ನೋಡುವೆ, ಆದರೆ ನಾನು ಇಸ್ರಾಯೇಲರಿಗೆ ಕೊಡುವ ದೇಶದಲ್ಲಿ ನೀನು ಪ್ರವೇಶಿಸುವುದಿಲ್ಲ,” ಎಂದು ಹೇಳಿದರು.