5 ಯೆಹೋಯಾಕೀಮನ ಇತರ ಕ್ರಿಯೆಗಳೂ, ಅವನು ಮಾಡಿದ ಸಮಸ್ತವೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. 6 ಯೆಹೋಯಾಕೀಮನು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದನು. ಅವನಿಗೆ ಬದಲಾಗಿ ಅವನ ಮಗ ಯೆಹೋಯಾಖೀನನು ಅರಸನಾದನು.
7 ಆದರೆ ಈಜಿಪ್ಟಿನ ಅರಸನು ತನ್ನ ದೇಶದಿಂದ ತಿರುಗಿ ಬರಲಿಲ್ಲ. ಏಕೆಂದರೆ ಈಜಿಪ್ಟ್ ನದಿ ಮೊದಲುಗೊಂಡು ಯೂಫ್ರೇಟೀಸ್ ನದಿಯವರೆಗೂ ಈಜಿಪ್ಟಿನ ಅರಸನಿಗೆ ಇದ್ದದ್ದನ್ನೆಲ್ಲಾ ಬಾಬಿಲೋನಿನ ಅರಸನು ಸ್ವಾಧೀನಮಾಡಿಕೊಂಡಿದ್ದನು.
8 ಯೆಹೋಯಾಖೀನನು ಅರಸನಾದಾಗ ಹದಿನೆಂಟು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಅವನ ತಾಯಿಯು ಯೆರೂಸಲೇಮಿನ ಎಲ್ನಾತಾನನ ಮಗಳಾದ ನೆಹುಷ್ಟಾ. 9 ಅವನು ತನ್ನ ತಂದೆಯು ಮಾಡಿದಂತೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದನು.
10 ಆ ಕಾಲದಲ್ಲಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಸೈನ್ಯದವರು ಯೆರೂಸಲೇಮಿಗೆ ವಿರೋಧವಾಗಿ ಬಂದು ಆ ಪಟ್ಟಣಕ್ಕೆ ಮುತ್ತಿಗೆ ಹಾಕಿದರು. 11 ಅಷ್ಟರಲ್ಲಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ತಾನೇ ಆ ಪಟ್ಟಣಕ್ಕೆ ಬಂದನು. 12 ಆಗ ಯೆಹೂದದ ಅರಸನಾದ ಯೆಹೋಯಾಖೀನನೂ, ಅವನ ತಾಯಿಯೂ, ಅವನ ಸೇವಕರೂ, ಅವನ ಪ್ರಧಾನರೂ, ಅವನ ಕಂಚುಕಿಯರೂ ಅಧಿಕಾರಿಗಳ ಸಹಿತವಾಗಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಗೆ ಶರಣಾದರು.
15 ನೆಬೂಕದ್ನೆಚ್ಚರನು ಯೆಹೋಯಾಖೀನನನ್ನು ಬಾಬಿಲೋನಿಗೆ ಸೆರೆಯಾಗಿ ಒಯ್ದನು. ಅರಸನ ತಾಯಿಯನ್ನೂ, ಅರಸನ ಹೆಂಡತಿಯರನ್ನೂ, ಅವನ ಅಧಿಕಾರಿಗಳನ್ನೂ, ದೇಶದ ಪ್ರತಿಷ್ಠಿತರನ್ನೂ ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆಯಾಗಿ ಒಯ್ದನು. 16 ಬಾಬಿಲೋನಿನ ಅರಸನು ಸಮಸ್ತ ಸ್ಥಿತಿವಂತರಾದ ಏಳು ಸಾವಿರ ಸೈನಿಕರನ್ನೂ, ಕೌಶಲಗಾರರನ್ನೂ ಮತ್ತು ಕಮ್ಮಾರರೂ ಆದ ಸಾವಿರ ಜನರನ್ನೂ ಬಾಬಿಲೋನಿಗೆ ಸೆರೆಯಾಗಿ ಒಯ್ದನು. 17 ಬಾಬಿಲೋನಿನ ಅರಸನು ಯೆಹೋಯಾಖೀನನ ಚಿಕ್ಕಪ್ಪನಾದ ಮತ್ತನ್ಯನನ್ನು ಅವನಿಗೆ ಬದಲಾಗಿ ಅರಸನನ್ನಾಗಿ ಮಾಡಿ, ಅವನಿಗೆ ಚಿದ್ಕೀಯನೆಂದು ಬೇರೆ ಹೆಸರನ್ನಿಟ್ಟನು.
18 ಚಿದ್ಕೀಯನು ಅರಸನಾದಾಗ ಇಪ್ಪತ್ತೊಂದು ವರ್ಷದವನಾಗಿದ್ದು, ಅವನು ಯೆರೂಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಅವನ ತಾಯಿ ಲಿಬ್ನದ ಯೆರೆಮೀಯನ ಮಗಳಾದ ಹಮೂಟಲ್. 19 ಅವನು ಯೆಹೋಯಾಕೀಮನು ಮಾಡಿದಂತೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. 20 ಯೆಹೋವ ದೇವರ ಕೋಪದಿಂದ ಯೆರೂಸಲೇಮಿನ ಮತ್ತು ಯೆಹೂದದ ಮೇಲೆ ಇವೆಲ್ಲ ಉಂಟಾದವು. ಹೀಗೆ ಯೆಹೋವ ದೇವರು ಅವರನ್ನು ತಮ್ಮ ಸಮ್ಮುಖದಿಂದ ತಳ್ಳಿಬಿಟ್ಟರು.